ಮಂಗಳೂರು,ನವೆಂಬರ್ ೨೮: ಸಿ.ಪಿ.ಐ ಮತ್ತು ಸಿ.ಪಿ.ಐ.ಎಂ ಜಂಟಿ ಅಶ್ರಯದಲ್ಲಿ ಬೆಲೆ ಏರಿಕೆ ವಿರೋಧಿ ಮತ್ತು ಅಹಾರ ಕ್ಕಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಮಂಗಳೂರು ಪುರಭವನದಲ್ಲಿ ಜರಗಿತ್ತು. ಈ ಸಮಾವೇಶದ ಅದ್ಯಕ್ಷೀಯ ಮಂಡಳಿಯಲ್ಲಿ ಸಿ.ಪಿ.ಐ ನ ಮುಖಂಡರಾದ ಬಿ. ವಿಶ್ವನಾಥ ನಾಯಕ್ ಹಾಗೂ ಸಿ.ಪಿ.ಐ ನ ಕೆ. ಆರ್. ಶ್ರೀಯಾನ್ ಉಪಸ್ಥಿತರಿದ್ದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್. ವಸಂತ ರೈ ಮಾತನಾಡಿ ಪ್ರಸ್ತುತ ದೇಶದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ರೈತ ವಿರೋದಿ ಕಾರ್ಮಿಕ ವಿರೋದಿ, ಬಂಡವಾಳ ಶಾಹಿ ಪರ ಧೋರಣೆಯಿಂದಾಗಿ ಆಹಾರ ಧಾನ್ಯಗಳು ಮತ್ತು ತರಕಾರಿ ಸೇರಿದಂತೆ ಅಗತ್ಯ ಉತ್ಪನ್ನಗಳ ದರಗಳು ಹೆಚ್ಚುತ್ತಿರುವುದು ಜನ ಸಾಮಾನ್ಯರನ್ನು ಕಾಡುತ್ತಿರುವ ಭೀಕರವಾದ ಸಮಸ್ಯೆಯಾಗಿದೆ ಎಂದರು. ಅವರು ಮುಂದುವರಿದು ಆರ್ಥಿಕ ಹಿಂಜರಿತ ಮತ್ತು ಬಿಕ್ಕಟ್ಟಿನ್ನಿಂದಾಗಿ ಉದ್ಯೋಗ ಕಡಿತ ಶರವೇಗದಲ್ಲಿ ಮುಂದುವರೆಯುತ್ತಿದ್ದು ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗುತ್ತಿದ್ದು, ಜೊತೆಗೆ ನೀರುದ್ಯೋಗ ತಾಂಡವವಾಡುತ್ತಿದೆ ಎಂದರು. ಲಾಭದಾಯಕವಾದ ಸರಕಾರಿ ಸೌಲಭ್ಯದ ಕಂಪೆನಿಗಳಲ್ಲಿ ಬಂಡವಾಳ ವಾಪಾಸಾತಿಗೆ ಮುಂದಾಗಿರುವುದು ಸರಕಾರದ ಕಾರ್ಮಿಕ ವಿರೋದಿ ನೀತಿಗೆ ನೀಡಿದ ಕೈಗನ್ನಡಿಯಂತಿದೆ ಎಂದು ಹೇಳಿದ ಅವರು ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿರುವ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ರಕ್ಷಿಸುವ ಗುರಿ ಹೊಂದಿರಬೇಕಾದ ಸರಕಾರ ಅಗತ್ಯ ಕ್ರಮಕೈಗೊಳ್ಳಲು ವಿಫಲವಾಗಿದೆ. ಮಾತ್ರವಲ್ಲದೆ ಬಜೆಟ್ನಲ್ಲಿಯ ಕೊರತೆಯನ್ನು ತುಂಬಿಸಲು ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಬಂಡವಾಳ ವಾಪಾಸಾತಿಯನ್ನು ನಿಲ್ಲಿಸಬೇಕಾದ ಸರಕಾರ ಕೈಗಾರಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳ ಹಾಗೂ ಎಡ ಪ್ರಜಾಪ್ರಭುತ್ವ ರಾಜಕೀಯ ಶಕ್ತಿಗಳ ಜಂಟಿ ಹೋರಾಟದ ಅಗತ್ಯತೆಯನ್ನು ಒತ್ತಿ ಹೇಳಿದರು. ಸಮಾವೇಶವನ್ನು ಉದ್ದೇಶಿಸಿ ಸಿ.ಪಿ.ಐ ನ ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ, ಸಿ.ಪಿ.ಎಮ್. ನ ಮಾಧವ, ರಾಜ್ಯ ಕಾರ್ಯದರ್ಶಿ ವಿ.ಜಿ.ಕೆ. ನಾಯರ್ ಮಾತನಾಡಿದರು. ವಸಂತ ಆಚಾರ್ಯ ಸ್ವಾಗತಿಸಿ ವಿ.ಎಸ್ ಬೆರಿಂಜ ವಂದಿಸಿದರು.
ಜನತೆಯನ್ನು ಮರೆತ ಕೇಂದ್ರ ಹಾಗೂ ರಾಜ್ಯ ಸರಕಾರ - ಡಾ| ಸಿದ್ಧನಗೌಡ ಪಾಟೀಲ್ ಟೀಕೆ
ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಪಾಣೆಮಂಗಳೂರು ಫಿರ್ಕಾ ಬೀಡಿ ಆಂಡ್ ಜನರಲ್ ವರ್ಕರ್ಸ್ ಯೂನಿಯನ್(ಎ.ಐ.ಟಿ.ಯು.ಸಿ) ನ ಮಾಣಿ ವಲಯ ನೂತನ ಕಛೇರಿ
ಉದ್ಘಾಟನಾ ಸಮಾರಂಭ
ಬಂಟ್ವಾಳ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಆಶೋತ್ತರಗಳನ್ನು ಮರೆತು ತೀರಾ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವದರ ಪರಿಣಾಮವಾಗಿ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಹಿಂಜರಿತ ಆಹಾರ ಧ್ಯಾನ್ಯಗಳ ಕೊರತೆ ಮುಂತಾದ ಭೀಕರ ಪರಿಣಾಮಗಳನ್ನು ಜನತೆ ಎದುರಿಸುತ್ತಿದ್ದು ಈ ಹಿನ್ನಲೆಯಲ್ಲಿ ಕಾರ್ಮಿಕ ವರ್ಗ ಜಾಗೃತಿಗಳನ್ನು ಮೈಗೂಡಿಸಿಕೊಂಡು ಸಂಘಟಿತ ಶಕ್ತಿಯ ಮುಖೇನ ಜನ ವಿರೋಧಿ ಸರಕಾರದ ನೀತಿಗಳನ್ನು ಬಗ್ಗುಬಡಿಯಬೇಕಾಗಿದೆ ಎಂದು ಸಿ.ಪಿ.ಐ. ನ ರಾಜ್ಯ ಮಂಡಳಿ ಕಾರ್ಯದರ್ಶಿ ಡಾ. ಸಿದ್ದನ ಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಮಾಣಿ ಜಂಕ್ಷನ್ನಲ್ಲಿ ಆಯೋಜಿಸಲಾದ, ಪಕ್ಷ ಹಾಗೂ ಸಾಮೂಹಿಕ ಸಂಘಟನೆಯ ನೂತನ ಕಛೇರಿ ಉದ್ಘಾಟನಾ ಸಮಾರಂಭದ ಬೃಹತ್ ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಮುಂದುವರಿದು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ಕಿಲೋ. ಒಂದಕ್ಕೆ ೨ ರೂ. ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಧಿಕಾರ ವಹಿಸಿಕೊಂಡ ನಂತರ ಅಕ್ಕಿ ಕೊಡುವುದರ ಬದಲು ಗಣಿಧಣಿಗಳ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದು ಬಡ ಜನರ ಆಶಾಕಿರಣವಾದ ಪಡಿತರ ವ್ಯವಸ್ಥೆಯನ್ನು ಕೂಡಾ ಸರಿಯಾದ ರೀತಿಯಲ್ಲಿ ವ್ಯವಸ್ಥೆಗೊಳಿಸದೆ ತೀರಾ ಅಸಮರ್ಪಕವಾಗಿ ಮುಂದುವರಿಯುತ್ತಿರುವುದು ಈ ಸರಕಾರದ ಜನವಿರೋದಿ ನೀತಿಗೆ ಜೀವಂತ ಸಾಕ್ಷಿ ಎಂದರು.
ಮಾತ್ರವಲ್ಲ ಜನತೆ ಇಂದು ಬೆಲೆ ಏರಿಕೆಯ ತೀವ್ರತೆಯ ಪರಣಾಮ ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದು ಇದರ ಜೊತೆಯಲ್ಲೇ ಕುರ್ಚಿ ಉಳಿಸಿಕೊಳ್ಳಲು ಪೈಪೋಟಿ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಬೀಕರ ನೆರೆ ಹಾವಳಿಗೆ ತುತ್ತಾದ ಜನತೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಬಹಳ ಕಷ್ಟ ಕಾರ್ಪಾಣ್ಯಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಸರಕಾರ ತೀರಾ ಶ್ರೀಮಂತರ ಪರ ಧೋರಣೆಯಲ್ಲೇ ಮುಂದುವರಿಯುತ್ತಿದೆ. ಅಲ್ಲದೆ ಬಿಜೆಪಿಯ ಅಂಗ ಸಂಸ್ಥೆಗಳಾದ ಬಜರಂಗದಳ, ಆರ್ಸ್ಸ್ಸ್, ಶ್ರೀ ರಾಮ ಸೇನೆ ಇವರಿಗೆ ನಿಜವಾದ ದೇಶ ಪ್ರೇಮ ಇದ್ದರೆ ಅನಗತ್ಯ ವಿಚಾರಗಳ ಬಗ್ಗೆ ಹೋರಾಟ ಮಾಡುವ ಬದಲು ಈ ದೇಶದ ಕಳ್ಳ ಸಂತೆಕೋರರ ದಸ್ತಾನುಗಳಲ್ಲಿ ಬಚ್ಚಿಟ್ಟ ಆಹಾರ ಧಾನ್ಯಗಳನ್ನು ತೆಗೆದು ಬಡ ಜನರಿಗೆ ಹಂಚಲಿ ಎಂದು ತಾಕೀತು ಮಾಡಿದರು. ಬೆಲೆ ಏರಿಕೆಯನ್ನೇ ಮೂಲ ಮಂತ್ರಾವನ್ನಾಗಿಸಿಕೊಂಡ ಕೇಂದ್ರ ಸರಕಾರ ಕೊನೆಗೂ ಅಧಿಕಾರಕ್ಕೆ ಬಂದಿರುವುದನ್ನು ಗಮನಿಸಿದರೆ ದೇಶದ ಜನತೆಗೆ ಸರಕಾರದ ಜನ ವಿರೋದಿ ನೀತಿಗಳ ಬಗ್ಗೆ ಪ್ರತಿಭಟಿಸಬೇಕಾದ ಚಿಂತನೆ ಬಂದಿಲ್ಲ ಎಂದರು.
ಪಕ್ಷದ ಈ ನೂತನ ಕಛೇರಿಯು ಬರೆ ಕಛೇರಿಯಾಗಿ ಮುಂದುವರೆಯದೆ ಬಡಜನರ ಕಣ್ಣೀರೊರೆಸುವ ನಿವೇಶನವಾಗಿ ಬರಲಿ ಆ ಮೂಲಕ ಬಡಜನತೆ ತನ್ನ ಕಷ್ಟಗಳನ್ನು ಪರಿಹರಿಸಿಕೊಳ್ಳಲಿ ಎಂದು ಹಾರೈಸಿದರು. ನೂತನ ಕಛೇರಿಯ ಉದ್ಘಾಟನೆಯನ್ನು ಮಾಜಿ ಶಾಸಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ವಿ.ಕಕ್ಕಿಲ್ಲಾಯ ನೆರವೇರಿಸಿದರು. ಬೃಹತ್ ಬಹಿರಂಗ ಸಭೆಗೆ ಮುನ್ನ ಕೋಡಾಜೆ ಪ್ರದೇಶದಿಂದ ಸಾವಿರಾರು ಸಮವಸ್ತ್ರಧಾರಿ ಮಹಿಳಾ ಕಾರ್ಮಿಕರ ಬೃಹತ್ ಮೆರವಣಿಗೆ ಗೊಂಬೆ ಕುಣಿತ, ಬ್ಯಾಂಡ್ ಮುಂತಾದವುಗಳೊಂದಿಗೆ ಆಕರ್ಷಕವಾಗಿ ನಡೆಯಿತು.
ಸಮಾರಂಭಗಳನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಬಿ. ವಿಶ್ವನಾಥ ನಾಕ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಿ.ಪಿ.ಐ. ನ ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಹಾಗೂ ಎಐಟಿಯುಸಿ ಮುಖಂಡರುಗಳಾದ ವಕೀಲ ಸತೀಶ್ ಕುಮಾರ್ ಬಂಟ್ವಾಳ, ಎಸ್ ಸಿ ಅಂಚನ್, ಬಿ. ಭಾಸ್ಕರ, ಕೆ.ಈಶ್ವರ, ಲೀಲಾವತಿ, ಉಮಾವತಿ, ಭಾರತಿ, ಡಿ. ಹೆನ್ರಿ ಲೋಬೋ, ಎಂ ಕರುಣಾಕರ, ವಿ.ಎಸ್ ಬೇರಿಂಜ, ರಾಮಣ್ಣ ರೈ, ರಾಜಮ್ಮ, ಕೆ.ವಿ ಭಟ್ , ವಿಠಲ ಶೆಟ್ಟಿ, ಉಪಸ್ಥತರಿದ್ದರು. ಬಿ.ಶೇಖರ್, ಪ್ರಸ್ತಾವನೆಗೈದರು. ಸುರೇಶ್ ಕುಮಾರ್ ಸ್ವಾಗತಿ ವಂದಿಸಿದರು.